Friday, December 27, 2013

ಸುಕ್ಷೇತ್ರ ಲಚ್ಯಾಣದ ಆರಾಧ್ಯ ದೈವ ಶ್ರೀ ಸಿದ್ಧಲಿಂಗ ಮಹಾರಾಜರು




ಮನುಕುಲದ ಅಭ್ಯುದಯಕ್ಕಾಗಿ ಮಹಾ ಪುರುಷರು ಜನ್ಮವೆತ್ತಿ ಬರುತ್ತಾರೆ. ಅಂತಹ ಮಾಹಾತ್ಮರೂ, ಪವಾಡ ಪುರುಷರೂ ಆದ ಲಚ್ಯಾಣದ ಸಿದ್ಧಲಿಂಗ ಮಹಾರಾಜರು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಎಂಬ ಗ್ರಾಮದಲ್ಲಿ ಲಚ್ಚಪ್ಪ ಮತ್ತು ನಾಗಮ್ಮ ದಂಪತಿಗಳ ಮಗನಾಗಿ ಅವತರಿಸಿ ಸಿದ್ಧಲಿಂಗ ನಾಮದಿಂದ ಬೆಳಗಿದರು.

ಶ್ರೀ ಸಿದ್ಧಲಿಂಗ ಮಹಾರಾಜರು ಅನೇಕ ಪವಾಡಗಳನ್ನು ಮಾಡಿರುವ ಬಗ್ಗೆ ದಂತಕಥೆಗಳಿವೆ. ಅವುಗಳಲ್ಲಿ ಲಚ್ಯಾಣ ರೈಲು ನಿಲ್ದಾಣದಲ್ಲಿ ರೈಲನ್ನು ತಡೆದು ನಿಲ್ಲಿಸಿ, ಅದು ಮುಂದೆ ಚಲಿಸದಂತೆ ಮಾಡಿರುವದು.

ಬಂಥನಾಳದ ಶ್ರೀಗುರು ಶಂಕರಲಿಂಗ ಗುರುಗಳ ಸೇವೆಗೈದು ಅಂತರಂಗ ಬಹಿರಂಗ ಶುದ್ಧವಾಗಿ ಪರಿಪಕ್ವಗೊಂಡು ಗುರುವಿನ ಸೂಚನೆಯಂತೆ ಸನ್ಯಾಸ ಧರ್ಮ ಸ್ವೀಕರಿಸಿ ದೇಶ ಸಂಚಾರಗೈದು, ಹೋದಲ್ಲೆಲ್ಲಾ ಭಜನೆ, ಧ್ಯಾನ, ಗುರುಸ್ಮರಣೆ, ಭಿಕ್ಷಾಟನೆ, ಅನ್ನ ಸಂತರ್ಪಣೆ ನಡೆಯುತ್ತಿತ್ತು. ನಿತ್ಯಕಾಯಕಯೋಗಿ ಸಿದ್ಧಲಿಂಗ ಸಾಧುರವರನ್ನು ಜನಸಮೂಹ ಆದರಿಸಿ, ಗೌರವಿಸಿ ನಮಿಸಿದರು. ಸೊಲ್ಲಾಪುರದಿಂದ ಕರ್ನಾಟಕದತ್ತ ಸಾಗಿ ಬಂದ ಸಿದ್ಧಲಿಂಗರು ಭೀಮೆಯಲ್ಲಿ ಮಿಂದು ಸಮೀಪದ ಲಚ್ಯಾಣ ಗ್ರಾಮದ ಗೌಡರಿಗಾಗಿ ಮೀಸಲಿರಿಸಿದ್ದ ರುದ್ರಭೂಮಿಯಲ್ಲಿ ಠಿಕಾಣಿ ಹೂಡಿದರು. ಆ ರುದ್ರಭೂಮಿ ಸಿದ್ಧಿಪುರುಷ ಸಿದ್ಧಲಿಂಗರ ಪಾದಸ್ಪರ್ಶದಿಂದ ಪುನೀತವಾಯಿತು. ಸಿದ್ಧಲಿಂಗರನ್ನು ನೋಡಿ ಜನಸಮುದಾಯ ಭಕ್ತಿಯಿಂದ ತಲೆಬಾಗಿದರು. ಅವರ ದರುಶನದಿಂದ ಪುಲಕಿತರಾದರು. ಅಲ್ಲಿ ಸಿದ್ಧಲಿಂಗರ ವಾಸಕ್ಕೆ ಕೊಂಪೆನಿರ್ಮಾಣವಾಯಿತು. ರಣಗುಡುತ್ತಿದ್ದ ರುದ್ರಭೂಮಿಯಲ್ಲಿ ಆಧ್ಯಾತ್ಮದ ಜ್ಯೋತಿ ಬೆಳಗಿತು.

ಸ್ವತಃ ಸಿದ್ಧಲಿಂಗರು ಸದ್ಗುರು ಶಂಕರಲಿಂಗರ ವಿಶಾಲವಾದ ಮಂಟಪದ ಕೆಳಗಿನ ಗವಿಯಲ್ಲಿ ತಮ್ಮ ಸಮಾಧಿಯನ್ನು ಸಜ್ಜುಗೊಳಿಸಿಕೊಂಡರು. ೧೮ ನೆಯ ಸಪ್ಟಂಬರ ೧೯೨೭ ರಂದು ಧ್ಯಾನಾಸಕ್ತ ಸ್ಥಿತಿಯಲ್ಲಿ ಬೆಳಗಿನ ಜಾವ ದೇಹತ್ಯಾಗ ಮಾಡಿ ಲಿಂಗದಲ್ಲಿ ಲೀನವಾದರು.

No comments:

Post a Comment